ಭಟ್ಕಳ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಬಾಡೂಟ ಸವಿದು
ದೇವಸ್ಥಾನಕ್ಕೆ ಭೇಟಿ ನೀಡಿದ್ರಾ ಸಿ.ಟಿ.ರವಿ?

ಭಟ್ಕಳ: ಭಟ್ಕಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಾಡೂಟ ಸವಿದು ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದರಾ? ಎನ್ನುವ ಬಿಸಿ ಬಿಸಿ ಚರ್ಚೆ ಇದೀಗ ಆರಂಭವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ನೋಡಿದ ಬಳಿಕ ಜನಸಾಮಾನ್ಯರು ಈ ಪ್ರಶ್ನೆಯನ್ನ ಕೇಳಿಕೊಳ್ಳುವಂತಾಗಿದೆ.

ಫೆ.19ರ ಭಾನುವಾರದಂದು ಸಿ.ಟಿ.ರವಿ ಅವರು ಉತ್ತರಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಕಾರವಾರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಅಲ್ಲಿಂದ ಭಟ್ಕಳಕ್ಕೆ ತೆರಳಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನೀಲ್ ನಾಯ್ಕ ಅವರ ಮನೆಯಲ್ಲಿ ಭರ್ಜರಿ ಬಾಡೂಟವನ್ನು ಸಿ.ಟಿ.ರವಿ ಸವಿದಿದ್ದರು. ಇಷ್ಟೇ ಆಗಿದ್ದರೆ ಅದೇನೂ ಚರ್ಚೆಗೆ ಬರುತ್ತಿರಲಿಲ್ಲ.

ಆದರೆ ಬಾಡೂಟ ಸವಿದ ಸಿ.ಟಿ. ರವಿ ಅವರು ಅಲ್ಲಿಂದ ಭಟ್ಕಳ ನಗರದ ಹಳೇ ಬಸ್ ನಿಲ್ದಾಣದ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಈ ವೇಳೆ ಇವರ ಜೊತೆಗಿದ್ದರು. ಅಲ್ಲದೇ, ದೇವಸ್ಥಾನದ ಆವರಣದಲ್ಲೇ ಶಾಸಕ ಸುನೀಲ್ ನಾಯ್ಕ ಹಾಗೂ ಕಮಿಟಿ ಸದಸ್ಯರಿಂದ ಸಿ.ಟಿ.ರವಿ ಸನ್ಮಾನವನ್ನೂ ಸ್ವೀಕರಿಸಿದ್ದರು.

ಹೀಗಾಗಿ ಇದೀಗ ಶಾಸಕರ ಜೊತೆ ಬಾಡೂಟ ಸವಿದಿರುವ ಹಾಗೂ ಬಳಿಕ ಅಲ್ಲಿಂದ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಳೆದ ಬಾರಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಬಾಡೂಟ ಸವಿದು ದೇವಸ್ಥಾನಕ್ಕೆ ತೆರಳಿದ್ದ ವಿಚಾರವನ್ನ ಬಿಜೆಪಿಯವರೇ ಟೀಕೆ ಮಾಡಿದ್ದರು. ಈ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ದೇವಸ್ಥಾನಕ್ಕೆ ಬರುವವರು ಮಾಂಸದೂಟ ಸವಿಯಬಾರದು ಎನ್ನುವ ನಿಯಮಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಸಹ ಸಿದ್ಧರಾಮಯ್ಯ ಬಾಡೂಟದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿತ್ತು.

ಇದೀಗ ಸಿ.ಟಿ.ರವಿ ಅವರೇ ಈ ರೀತಿ ಮಾಡಿರುವುದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವುದಲ್ಲದೇ, ವಿರೋಧ ಪಕ್ಷಗಳಿಂದ ಟೀಕೆಗಳು ವ್ಯಕ್ತವಾಗುತ್ತಿವೆ.

WhatsApp
Facebook
Telegram
error: Content is protected !!
Scroll to Top