ಜನವರಿ 10 ರಿಂದ 15 ರವರೆಗೆ ಸಿದ್ದಾಪುರ ಬಾಲಿಕೊಪ್ಪ ಅಯ್ಯಪ್ಪ ಸ್ವಾಮಿ ಜಾತ್ರಮಹೊತ್ಸಮ

ಸಿದ್ದಾಪುರ: ತಾಲೂಕಿನಲ್ಲಿ ಪ್ರಸಿದ್ದ ದೇವಾಲಯಗಳಲ್ಲೊಂದಾದ, ಮಿನಿ ಶಬರಿಮಲೆ ಎಂದೇ ಖ್ಯಾತಿ ಪಡೆದಿರುವ ಪಟ್ಟಣದ ಬಾಲಿಕೊಪ್ಪದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ಜಾತ್ರಾಮಹೋತ್ಸವವು 2023ನೇ ಜನವರಿ 10 ರಿಂದ 15 ರವರೆಗೆ ವಿಜೃಂಭಣೆಯಿಂದ ಜರುಗಲಿದ್ದು, ಆಡಳಿತ ಸಮಿತಿಯ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಅಯ್ಯಪ್ಪ ಸ್ವಾಮಿ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಹೇಳಿದರು.


ಅವರು ಶುಕ್ರವಾರ ಸಂಜೆ ದೇವಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ದೇವಸ್ಥಾನದ ತಂತ್ರಿಯವರಾದ ಬ್ರಹ್ಮಶ್ರೀ ತರಣನಲ್ಲೂರು ಪದ್ಮನಾಬನ್ ಉಣ್ಣಿ ನಂಬೂದರಿ ಇವರ ನೇತ್ರತ್ವದಲ್ಲಿ ವಿಶೇಷ ಪೂಜೆ ನಡೆಯಲಿದೆ. ಜನವರಿ 10 ರಂದು ಮಂಗಳವಾರ ಧ್ವಜಾರೋಹಣದೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಅಂದು ಸಾರ್ವತ್ರಿಕ ಗಣಹೋಮ, ಸಂಜೆ ಪಡಿ ಪೂಜೆ ನೆರವೇರಲಿದ್ದು, ಈ ಬಾರಿ ಇರಮುಡಿ ಹೊತ್ತವರಿಗೆ ಮಾತ್ರ ಪಡಿ ಪೂಜೆಗೆ ಅವಕಾಶ ನೀಡಲಾಗಿದೆ. 11 ರಂದು ರಕ್ಷತ್ರಯಹವನ, ಆಶ್ಲೇಷಬಲಿ, 12 ರಂದು ರುದ್ರಹವನ, ವಿಶೇಷ ಪೂಜೆ, 13 ರಂದು ದುರ್ಗಾಹವನ, ಪಾರಾಯಣ, 14 ರಂದು ಅಷ್ಟಾಭಿಷೇಕ, ವಿಶೇಷ ಪೂಜೆ, 15 ರಂದು ಓಕಳಿ ಹಾಗೂ ಧ್ವಜ ಅವರೋಹಣ ನಡೆಯಲಿದೆ. ಜನವರಿ 11 ರಂದು ಅನ್ನಸಂತರ್ಪಣೆ ಹಮ್ಮಿಕೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಬೇಕು ಎಂದರು.
ಧಾರ್ಮಿಕ ವಿಧಿ-ವಿಧಾನದಂತೆ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಜನವರಿ 14 ರಂದು ಮಧ್ಯಾಹ್ನ 3 ಗಂಟೆಯಿಂದ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರಿಂದ ಆಶೀರ್ವಚನ ನಡೆಯಲಿದ್ದು, ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬಾರಿಯ ಮೇಲೆ ಶ್ರೀ ಅಯ್ಯಪ್ಪ ಸ್ವಾಮಿಯ ಮೆರವಣಿಗೆ ನಡೆಯಲಿದೆ. ಜಾತ್ರೆ ಸುಲಲಿತವಾಗಿ, ವಿಜೃಂಭಣೆಯಿಂದ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಪೂರ್ಣಪ್ರಮಾಣದ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ 150 ಅಂಗಡಿಗಳಿಗೆ ಪರವಾನಿಗೆ ನೀಡಲಾಗಿದೆ. ಜಾತ್ರೆಯ ಅಲಂಕಾರ, ನೀರಿನ ವ್ಯವಸ್ಥೆ, ಊಟೋಪಚಾರ, ಸ್ವಚ್ಚತೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.
ಪ್ರತಿ ದಿನ ವಿಶೇಷ ಪೂಜೆ, ಭಜನಾ ಕಾರ್ಯಕ್ರಮಗಳು, ಸಾಯಂಕಾಲ ರಸಮಂಜರಿ ಯಕ್ಷಗಾನ ಹಾಗೂ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ತಾಲೂಕಿನ ಸಮಸ್ತ ನಾಗರಿಕರು ಜಾತ್ರೆಯ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು.
ಈ ವೇಳೆ ಅಯ್ಯಪ್ಪ ಸ್ವಾಮಿ ಕೋಶಾಧ್ಯಕ್ಷ ಸುದರ್ಶನ ಪಿಳ್ಳೆ, ಸಹ ಕಾರ್ಯದರ್ಶಿ ಸದಾನಂದ ಕಾಮತ, ಸಮಿತಿಯ ಪ್ರಮುಖರಾದ ರಘುವೀರ ಎಸ್ ನಾಯ್ಕ, ಎಸ್.ಕೆ‌.ನಾಯ್ಕ ಕಡಕೇರಿ, ರಾಘವೇಂದ್ರ ನಾಯಕ, ಪ್ರಶಾಂತ ರೋಕಡೆ, ಅಮಿತ ಹಳದಿಪುರ, ಸದಾಶಿವ ನಾಯ್ಕ, ರಾಘು ಹೊನ್ನೇಗುಂಡಿ, ವಿಜಯ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top