ಪಂಪ ಪ್ರಶಸ್ತಿ ಜಿಲ್ಲೆಯ ಸಾಹಿತಿಗಳಿಗೆ ನೀಡುವಂತಾಗ ಬೇಕು: ಕಸಾಪ ಜಿಲ್ಲಾ ಅಧ್ಯಕ್ಷ ಬಿ ಎನ್ ವಾಸರೆ

ಭಟ್ಕಳ : ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಹಲವು ಉತ್ಸವಗಳು ನಡೆದಿರಲಿಲ್ಲ, ಸರ್ಕಾರದಿಂದಲೇ ನಡೆಯಲ್ಪಡುವ ಕರಾವಳಿ ಉತ್ಸವ, ಕದಂಬೋತ್ಸವ ಈ ವರ್ಷ ಆಚರಿಸಲೇಬೇಕು. ಅಲ್ಲದೇ ಕದಂಬೋತ್ಸವ ಸಂದರ್ಭದಲ್ಲಿ ಕೊಡುವ ಪಂಪ ಪ್ರಶಸ್ತಿಯನ್ನು ಜಿಲ್ಲೆಯ ಸಾಹಿತಿಗಳಿಗೇ ನೀಡುವಂತಾಗಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ ಎನ್ ವಾಸರೆ ಒತ್ತಾಯಿಸಿದ್ದಾರೆ.


ಭಟ್ಕಳದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯ ರಾಜಕಿಯೇತರ ಅಭಿವೃದ್ದಿ ಹೋರಾಟಗಳ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ಸದಾ ಇರುತ್ತದೆ. ಜೊತೆಗೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಬಯಸುವ ಕಸಾಪ ಎಲ್ಲರನ್ನೊಳಗೊಳ್ಳುವ ಮೂಲಕ ಪರಸ್ಪರ ಪ್ರೀತಿ ಬೆಸೆಯುವ ಕೆಲಸ ಮಾಡುತ್ತಿದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೆಳನ ನಡೆಸುವಂತೆ, ಹಾಗೂ ಪ್ರತಿ ತಾಲೂಕು ಕೇಂದ್ರದಲ್ಲಿ ಸಾಹಿತ್ಯಭವನ ನಿರ್ಮಿಸಲು ಅವಕಾಶ ನೀಡುವಂತೆ ಕಸಾಪ ರಾಜ್ಯಾಧ್ಯಕ್ಷರಿಗೆ ಮನವಿ ನೀಡಲಾಗಿದೆ.
ಇದಲ್ಲದೇ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕನ್ನಡ ಬಾರದ ಸಿಬ್ಬಂದಿಗಳಿದ್ದು, ಅವರಿಂದ ಗ್ರಾಹಕರ ಜೊತೆ ಸಂವಹನ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ನೀಡಿ, ಉದ್ಯೋಗಕ್ಕೆ ಸೇರಿದ ಆರು ತಿಂಗಳೊಳಗೆ ಕನ್ನಡ ಭಾಷೆ ಕಲಿತುಕೊಳ್ಳಬೇಕೆಂಬ ನಿಯಮದನ್ವಯ ತಕ್ಷಣ ಕನ್ನಡ ಕಲಿತುಕೊಳ್ಳಬೇಕು.
ಇಲ್ಲವಾದಲ್ಲಿ ನಿಯಮಾನುಸಾರ ಹೋರಾಟ ಅನಿವಾರ್ಯ ಆಗುತ್ತದೆ. ಜೊತೆಗೆ ಎಲ್ಲಾ ಅಂಗಡಿ ಮಳಿಗೆಗಳ ನಾಮಫಲಕಗಳೂ ಕೂಡ ಸರ್ಕಾರದ ನಿಯಮದಂತೆ ಕನ್ನಡದಲ್ಲಿರುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಲಾಗಿದೆ ಎಂದು ಬಿ ಎನ್ ವಾಸರೆ ಹೇಳಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಪಿ ಆರ್ ನಾಯ್ಕ, ಜಾರ್ಜ್ ಫರ್ನಾಂಡಿಸ್, ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಕಸಾಪ ಅಧ್ಯಕ್ಷರುಗಳು ಇದ್ದರು.

WhatsApp
Facebook
Telegram
error: Content is protected !!
Scroll to Top