ಕೋವಿಡ್ ಪರೀಕ್ಷೆಗಾಗಿ ಮಾತ್ರ ಹೊರಬನ್ನಿ ಎಂದ ಚೀನಾ: ಮನೆ ಆವರಣದಲ್ಲಿ ಅಡ್ಡಾಡುವುದೂ ನಿಷೇಧ!

ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಒಂದಾದ ಶಾಂಘೈನಲ್ಲಿ ಕಠಿಣ ಲಾಕ್‌ಡೌನ್ ನಿರ್ಬಂಧ ಜಾರಿಗೊಳಿಸಲಾಗಿದೆ. ಕೋವಿಡ್ ಪರೀಕ್ಷೆಯ ಹೊರತಾಗಿ ಬೇರೆ ಯಾವ ಕಾರಣಕ್ಕೂ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ವಾಯು ವಿಹಾರಕ್ಕೆಂದು ಮನೆಯ ಕಾಂಪೌಂಡ್ ಭಾಗದಲ್ಲಿಯೂ ಓಡಾಡುವಂತೆ ಇಲ್ಲ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬೀಜಿಂಗ್: ಶಾಂಘೈ ನಗರದ ಪೂರ್ವದ ಅರ್ಧದಷ್ಟು ಭಾಗದಲ್ಲಿರುವ ಜನತೆಯ ಮೇಲೆ ಕಠಿಣ ಲಾಕ್‌ ಡೌನ್‌  ನಿರ್ಬಂಧಗಳನ್ನು ವಿಧಿಸಲಾಗಿದೆ. ಇಲ್ಲಿನ ಜನರು ಯಾವ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು. ನಾಯಿ ಜತೆ ವಾಕಿಂಗ್‌ಗೆಂದು ಕೂಡ ಮನೆ ಬಾಗಿಲು ತೆರೆಯುವಂತಿಲ್ಲ ಎಂದು ಆಡಳಿತ ಎಚ್ಚರಿಕೆ ನೀಡಿದೆ.

ಪುಡೊಂಗ್ ಜಿಲ್ಲೆಯಲ್ಲಿ ಪ್ರಮುಖ ಹಣಕಾಸು ಸಂಸ್ಥೆಗಳು ಮತ್ತು ಶಾಂಘೈ ಷೇರು ಮಾರುಕಟ್ಟೆ ಇವೆ. ಇಲ್ಲಿನ ಎಲ್ಲ ನಿವಾಸಿಗಳೂ ತಮ್ಮ ಮನೆಯೊಳಗೇ ಬಂದಿಯಾಗಬೇಕಿದೆ. ಅವರು ಮನೆಯಿಂದ ಹೊರ ಬರಲು ಸಿಗುವ ಅನುಮತಿಯೆಂದರೆ ಅದು ಕೋವಿಡ್ ಪರೀಕ್ಷೆಗೆ ಒಳಪಡಲು ಮಾತ್ರ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ತಿಳಿಸಿದೆ.

ನಿವಾಸಿಗಳು ತಮ್ಮ ಮನೆಯ ಹಜಾರ, ಗ್ಯಾರೇಜ್‌ಗಳು ಅಥವಾ ಮನೆ ಕಾಂಪೌಂಡ್‌ನ ತೆರೆದ ಪ್ರದೇಶಗಳಲ್ಲಿ ಸಹ ವಾಕಿಂಗ್ ಮಾಡುವಂತೆ ಇಲ್ಲ. ಸೋಂಕು ಹರಡುವ ಅಪಾಯವನ್ನು ತಗ್ಗಿಸಲು ಈ ಆದೇಶ ನೀಡಲಾಗಿದೆ ಎಂದು ಶಾಂಘೈ ಪಾಲಿಕೆ ಆರೋಗ್ಯ ಆಯೋಗದ ಅಧಿಕಾರಿ ವು ಕಿಯಾನ್ಯು ಮಂಗಳವಾರ ತಿಳಿಸಿದ್ದಾರೆ.

ಚೀನಾದ ಆರ್ಥಿಕ ಕೇಂದ್ರವಾಗಿರುವ ಶಾಂಘೈನ 25 ಮಿಲಿಯನ್ ಜನಸಂಖ್ಯೆಯನ್ನು ಎರಡು ಹಂತಗಳಲ್ಲಿ ಲಾಕ್‌ಡೌನ್ ನೆಪದಲ್ಲಿ ಬಂಧಿಗಳನ್ನಾಗಿಸಲಾಗಿದೆ. ನಗರದ ಅರ್ಧ ಭಾಗ ನಾಲ್ಕು ದಿನಗಳವರೆಗೆ ಲಾಕ್‌ಡೌನ್ ಆಗಿತ್ತು. ಈಗ ಉಳಿದ ಅರ್ಧ ಭಾಗ ಕೂಡ ನಿರ್ಬಂಧಕ್ಕೆ ಒಳಪಟ್ಟಿದೆ. ಎರಡು ವರ್ಷಗಳಲ್ಲಿ ನಗರದಲ್ಲಿ ಅತಿ ದೊಡ್ಡ ಕೋವಿಡ್‌ 19 ಸಾಂಕ್ರಾಮಿಕ ಪ್ರಸರಣ ಇದಾಗಿದ್ದು, ಇದನ್ನು ನಿಯಂತ್ರಿಸಲು ಇಡೀ ನಗರವನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಈ ಮೊದಲು ಜಾರಿಯಾಗಿದ್ದ ನಿರ್ಬಂಧಗಳಲ್ಲಿ ತಮ್ಮ ಕಟ್ಟಡದ ಲಾಬಿಗಳಿಗೆ ಹೋಗಲು, ತಮ್ಮ ಕಾಂಪೌಂಡ್ ಭಾಗಗಳಲ್ಲಿ ಅಡ್ಡಾಡಲು ಅವಕಾಶವಿತ್ತು. ತಮ್ಮ ಕಟ್ಟಡದಲ್ಲಿ ಯಾವುದೇ ಕೋವಿಡ್ ಪ್ರಕರಣ ಪತ್ತೆಯಾಗದೆ ಇದ್ದರೆ ಸಂಕೀರ್ಣದಿಂದ ಹೊರಕ್ಕೆ ಬರಲೂ ಅನುಮತಿ ಇತ್ತು. ಆದರೆ ಭಾನುವಾರ ರಾತ್ರಿ ನಿಯಮಗಳನ್ನು ಬಲಪಡಿಸಿರುವ ಶಾಂಘೈ ಅಧಿಕಾರಿಗಳು, ಕಠಿಣ ನಿರ್ಬಂಧ ಜಾರಿಗೆ ತಂದಿದ್ದಾರೆ.

ಲಾಕ್‌ಡೌನ್ ಜಾರಿಯಾದ ಮೊದಲ ದಿನ 4,477 ಕೊರೊನಾ ವೈರಸ್‌  ಪ್ರಕರಣಗಳು ಪತ್ತೆಯಾಗಿವೆ. ಸೋಮವಾರ 3500 ಕೇಸ್‌ಗಳು ವರದಿಯಾಗಿದ್ದವು. ಮಂಗಳವಾರ 6,886 ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ ಎಂದು ಚಿನಾ  ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ನೀಡಿದೆ.

ಕೋವಿಡ್ ಲಸಿಕೆಗಳು ಮತ್ತು ಆಂಟಿ ವೈರಲ್ ಔಷಧಗಳ ಆಮದಿಗೆ ಶಾಂಘೈ ಪಾಲಿಕೆ ಸರ್ಕಾರ ಬೆಂಬಲ ಮುಂದುವರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಂಘೈ ಮೂಲಕ ಚೀನಾ, ಈ ತಿಂಗಳು 21 ಸಾವಿರ ಪೆಟ್ಟಿಗೆಗಳಷ್ಟು ಫೈಜರ್ ಕೋವಿಡ್ ಮಾತ್ರೆ ಪ್ಯಾಕ್ಸ್ಲೋವಿಡ್ ಆಮದು ಮಾಡಿಕೊಂಡಿದೆ. ಈ ಔಷಧವನ್ನು ಅಧಿಕ ಅಪಾಯದ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ.

ಕೋವಿಡ್ ಕಾರಣದಿಂದ ತೀವ್ರ ತೊಂದರೆಗೆ ಸಿಲುಕಿರುವ ಉದ್ಯಮಗಳಿಗೆ ತೆರಿಗೆ ವಿನಾಯಿತಿ, ಬಾಡಿಗೆ ವಿಸ್ತರಣೆ ಅಥವಾ ಕಡಿತ, ಸಣ್ಣ ಉದ್ಯಮಗಳಿಗೆ, ರೀಟೇಲ್ ಮತ್ತು ಆಹಾರ ಉದ್ಯಮಕ್ಕೆ ಸಾಲ ನೆರವು ಜಾರಿಗೊಳಿಸಲಾಗಿದೆ.

WhatsApp
Facebook
Telegram
error: Content is protected !!
Scroll to Top