ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಬೇಡಿಕೆ: ಕೇಂದ್ರದ ನಡೆ ಸ್ವಾಗತಿಸಿದ ಸಚಿವ ಆರ್. ಅಶೋಕ್

ಬೆಂಗಳೂರು : ಹಿಂದೂಗಳು ಅಥವಾ ಇತರ ಧರ್ಮದವರು ಕಡಿಮೆ ಸಂಖ್ಯೆಯಲ್ಲಿ ಇದ್ದರೆ ರಾಜ್ಯಗಳು ಅಂಥವರನ್ನು ಅಲ್ಪಸಂಖ್ಯಾತರು  ಎಂದು ಘೋಷಿಸಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿರುವುದು ಸ್ವಾಗತಾರ್ಹ ಎಂದು ಕಂದಾಯ ಸಚಿವ  ಆರ್. ಅಶೋಕ್ ಹೇಳಿದರು.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು ‘ಕೇಂದ್ರದ ನಡೆಯನ್ನು ನಾನು ಸ್ವಾಗತಿಸುತ್ತೇನೆ.
ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರು ಎಲ್ಲ ರಾಜ್ಯದಲ್ಲಿ ಇದ್ದಾರೆ. ಜಮ್ಮು – ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಅವರಿಗೆ ಅಲ್ಪ ಸಂಖ್ಯಾತ ಸ್ಥಾನಮಾನ ಕೊಡುವ ಅಧಿಕಾರ ಆ ರಾಜ್ಯ ಸರ್ಕಾರಗಳಿಗಿದೆ’ ಎಂದರು.

ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ತಳಮಟ್ಟದ ಜನರಿಗೆ ತಲುಪಬೇಕು. ಈ ಸಂಬಂಧ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಿಸುತ್ತೇನೆ. ಈ ಹಿಂದೆಯೆ ಇದು ಆಗಬೇಕಿತ್ತು, ಆದರೆ ಈಗ ಆಗಿದೆ. ಅದಕ್ಕೆ ನನ್ನ ಸ್ವಾಗತ ಎಂದರು.

ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ‘ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ವಿಚಾರವಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಅಪ್ಲಿಕೇಷನ್ ಹಾಕಿದೆ. ಈ ಬಗ್ಗೆ ನಾನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದೇನೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿ ಇಲ್ಲ’ ಎಂದರು.

ರಾಜ್ಯದಲ್ಲಿ ಹಿಂದೂಗಳು ಅಥವಾ ಇತರ ಧರ್ಮದವರು ಕಡಿಮೆ ಸಂಖ್ಯೆಯಲ್ಲಿ ಇದ್ದರೆ ರಾಜ್ಯಗಳು ಅಂಥವರನ್ನು ಅಲ್ಪಸಂಖ್ಯಾತರು ಎಂದು ಘೋಷಿಸಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದೆ. ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ಕೇಂದ್ರ ಸರ್ಕಾರ ಹೀಗೆ ಹೇಳಿದೆ.

WhatsApp
Facebook
Telegram
error: Content is protected !!
Scroll to Top