‘ಭಗವದ್ಗೀತೆ ಹಿಂದೂ ಧರ್ಮ ಗ್ರಂಥವಲ್ಲ.. ಆದರೆ..!’; ಪ್ರತಾಪ್ ಸಿಂಹ ಹೇಳಿದ್ದೇನು?

ಖುರಾನ್ ಅಲ್ಲಾ ಮಾತ್ರ ದೇವರು‌, ಅಲ್ಲಾ ಹೊರತು ಬೇರೆ ಯಾವ ದೇವರು ಇಲ್ಲ ಅನ್ನುತ್ತೆ. ಬೈಬಲ್ ಯೇಸು ಕ್ರಿಸ್ತ ಬಿಟ್ಟರೆ ಬೇರೆ ದೇವರ ಮೆಸೇಂಜರ್ ಇಲ್ಲ ಅನ್ನುತ್ತೆ. ಆದ್ರೆ ಭಗವದ್ಗೀತೆಯಲ್ಲಿ ಮಾತ್ರ ಧರ್ಮ ಮಾರ್ಗ ಭೋದನೆ ಮಾಡಲಾಗಿದೆ. ಧರ್ಮ ಅನ್ನುವುದಕ್ಕೆ ರಿಲೀಜಿಯನ್ ಅನ್ನುವ ಸಂಕುಚಿತ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳುವ ಮೂಲಕ ಶಾಲಾ ಪಠ್ಯಕ್ರಮಕ್ಕೆ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದರು.

ಮೈಸೂರು: ಕಾಂಗ್ರೆಸ್‌ನವರು ಅವರೇ ಮಾಡಿದ ಅಪರಾಧವನ್ನು ಅವರೇ ನೋಡಲು ಹೇಗೆ ಸಾಧ್ಯ? ಆದರೆ ಜನರು ನೋಡುತ್ತಿದ್ದಾರೆ. ಅವರಿಗೆ ಸತ್ಯದ ಅರಿವಾಗಿದೆ. ಕಾಶ್ಮೀರ್‌ ಫೈಲ್ಸ್‌ನಲ್ಲಿರುವ ಒಂದೊಂದು ದೃಶ್ಯವು ಸತ್ಯ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೇ ಮಾಡಿದ ಕರ್ಮ ಅವರೇ ಹೇಗೆ ನೋಡಲು ಸಾಧ್ಯ? ಎಂದರು. ಜೈ ಭೀಮ್‌ ಸಿನಿಮಾಗೆ ತೆರಿಗೆ ವಿನಾಯತಿ ಕೊಡಲಿಲ್ಲ ಎಂಬ ಕಾಂಗ್ರೆಸ್‌ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಜೈ ಭೀಮ್ ಸಿನಿಮಾ ಬಿಡುಗಡೆಯಾಗಿದ್ದು ಓಟಿಟಿಯಲ್ಲಿ. ಥಿಯೇಟರ್‌ಗಳಲ್ಲಿ ಅಲ್ಲ. ಓಟಿಟಿಯಲ್ಲಿ ತೆರಿಗೆ ವಿನಾಯತಿ ಕೊಡಲು ಹೇಗೆ ಸಾಧ್ಯ? ಕಾಂಗ್ರೆಸ್ ನಾಯಕರು ಪೆದ್ದು ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಲಿ ಎಂದು ತಿರುಗೇಟು ನೀಡಿದರು.

ಶಾಲಾ ಪಠ್ಯಕ್ರಮಕ್ಕೆ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾತನಾಡಿ, ಭಗವದ್ಗೀತೆ ಹಿಂದೂ ಧರ್ಮ ಗ್ರಂಥವಲ್ಲ. ಸತ್ಯ, ನ್ಯಾಯ, ಧರ್ಮ ಮಾರ್ಗದಲ್ಲಿ ನಡೆಯುವಂತೆ ತಿಳಿ ಹೇಳುವ ಗ್ರಂಥ. ಮಕ್ಕಳಿಗೆ ಭಗವದ್ಗೀತೆ ಭೋದಿಸೋದು ಸ್ವಾಗತಾರ್ಹ. ಖುರಾನ್ ಅಲ್ಲಾ ಮಾತ್ರ ದೇವರು‌, ಅಲ್ಲಾ ಹೊರತು ಬೇರೆ ದೇವರು ಇಲ್ಲ ಅನ್ನುತ್ತೆ. ಬೈಬಲ್ ಯೇಸು ಬಿಟ್ಟರೆ ಬೇರೆ ದೇವರ ಮೆಸೇಂಜರ್ ಇಲ್ಲ ಅನ್ನುತ್ತೆ. ಆದ್ರೆ ಭಗವದ್ಗೀತೆಯಲ್ಲಿ ಮಾತ್ರ ಧರ್ಮ ಮಾರ್ಗ ಭೋದನೆ ಮಾಡಲಾಗಿದೆ. ಧರ್ಮ ಅನ್ನುವುದಕ್ಕೆ ರಿಲೀಜಿಯನ್ ಅನ್ನುವ ಸಂಕುಚಿತ ಅರ್ಥ ಕಲ್ಪಿಸುವುದು ಬೇಡ. ಕುರುಕ್ಷೇತ್ರ ಧರ್ಮ- ಅಧರ್ಮಗಳ ನಡುವಿನ ಯುದ್ಧ. ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಜೀವನ ಕ್ರಮ ಹೇಗಿಬೇಕು ಅಂತ ಭೋದಿಸಿದ್ದಾನೆ. ಆದ್ದರಿಂದಲೇ ಅಮೆರಿಕಾ ಸೇರಿದಂತೆ ಎಲ್ಲಾ ದೇಶಗಳ ಅಧ್ಯಕ್ಷರೂ ಪ್ರಮಾಣ ವಚನ ಸ್ವೀಕಾರ ಮಾಡಲು ಭಗವದ್ಗೀತೆ ಮಾತ್ರ ಸೂಕ್ತವಾಗಿದೆ ಎನ್ನುತ್ತಾರೆ ಎಂದರು.

ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯ, ದೆಹಲಿ ಸುಲ್ತಾನರ ಕ್ರೌರ್ಯದ ಕತೆಗಳನ್ನೇ ಭೋದಿಸಲಾಗಿದೆ ಎಂದ ಪ್ರತಾಪ್ ಸಿಂಹ, ಚೋಳ, ಚೇರರು, ಅಸ್ಸಾಂ ದೊರೆಗಳ ಸಾವಿರಾರು ವರ್ಷಗಳ ಇತಿಹಾಸ ಮರೆಮಾಚಲಾಗಿದೆ. ಇದೆಲ್ಲವನ್ನೂ ಓದಿದರೆ ನಮ್ಮ ಬಗ್ಗೆ ಅಭಿಮಾನವೇ ಮೂಡೋದಿಲ್ಲ.ಈಗಲಾದರೂ ಪಠ್ಯಕ್ರಮ ಬದಲಾವಣೆಗೆ ಮುಂದಾಗಿರೋದು ಸ್ವಾಗತಾರ್ಹ. ಶಿಕ್ಷಣ ಸಚಿವರು, ಸಿಎಂ ಪ್ರಸ್ತಾಪ ಮಾಡಿದ್ದಾರೆ. ತಜ್ಞರ ಸಮಿತಿ ರಚಿಸಿ ಭಗವದ್ಗೀತೆ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕುಮಾರಸ್ವಾಮಿಗೆ ಟಾಂಗ್
ಕುಮಾರಸ್ವಾಮಿ ಅವರ ಮಾತನ್ನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ಸರಿ. ಆದ್ರೆ ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ ಎಂದ ಪ್ರತಾಪ್ ಸಿಂಹ, ಕುಟುಂಬ ರಾಜಕಾರಣ ಮಾಡಬಾರದು. ನನಗೆ ಎಲ್ಲಾ ಅಧಿಕಾರ ಬೇಕು ಅನ್ನೋ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಈ ಕಾರಣಕ್ಕೆ ಮಕ್ಕಳಿಗೆ ಭಗವದ್ಗೀತೆ ಅವಶ್ಯಕತೆ ಇದೆ ಎಂದು ಹೆಚ್‌ಡಿಕೆಗೆ ಟಾಂಗ್‌ ನೀಡಿದ್ರು.

ಇನ್ನು ಪಠ್ಯಕ್ರಮದಲ್ಲಿ ಭಗವದ್‌ಗೀತೆ ಸೇರಿಸಲು ನಮ್ಮ ಅಭ್ಯಂತರವಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂತಃಕರಣದಿಂದ ನೈಜವಾಗಿ ಹೇಳಿದ್ದರೆ ಸ್ವಾಗತಿಸುತ್ತೇನೆ. ಇದರ ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿಚಾರವನ್ನೂ ಪಠ್ಯಕ್ರಮಕ್ಕೆ ಸೇರಿಸುವಂತೆ ಒತ್ತಾಯಿಸಲಿ. ಸಿದ್ದರಾಮಯ್ಯ ಟಿಪ್ಪುವನ್ನು ಆರಾಧಿಸಿ ಮೆರೆಸಿದವರು ಅಂತಾ ಸಿದ್ದರಾಮಯ್ಯಗೆ ಟಾಂಗ್‌ ನೀಡಿದ್ರು.

WhatsApp
Facebook
Telegram
error: Content is protected !!
Scroll to Top