ಡಿಕೆಶಿ, ರೇಣುಕಾಚಾರ್ಯ ಸೈಡಿಗೆ ತೆರಳಿ ಪ್ರತ್ಯೇಕ ಮಾತುಕತೆ: ಸ್ಪಷ್ಟನೆ

ಬೆಂಗಳೂರು, ಮಾರ್ಚ್ 19: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ಈಗ ಚರ್ಚೆಯ ವಿಷಯವಾಗಿದೆ.

ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಹಲವು ಬಾರಿ ರೇಣುಕಾಚಾರ್ಯ ತಮ್ಮ ಅಸಮಾಧಾನವನ್ನು ಬಹಿರಂಗ ಪಡಿಸಿದ್ದುಂಟು. ಈಗ, ಬಜೆಟ್ ಅಧಿವೇಶನದ ನಂತರ ಮತ್ತೆ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇವೆಲ್ಲದರ ಮಧ್ಯೆ ವಿಧಾನಸೌಧದ ಆವರಣದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ರೇಣುಕಾಚಾರ್ಯ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ವಲಯದಲ್ಲಿ ಚಕಿತ ಪಡುವಂತಾಗಿದೆ.

ವಿಧಾನಸೌಧದ ಪಶ್ಚಿಮ ದ್ವಾರದಿಂದ ಡಿಕೆಶಿ ಹೊರಗೆ ಬರುತ್ತಿದ್ದಾಗ, ಅದೇ ಸಮಯಕ್ಕೆ ಸರಿಯಾಗಿ ರೇಣುಕಾಚಾರ್ಯ ಕೂಡಾ ಹೊರಗೆ ಬಂದಿದ್ದಾರೆ. ‘ಏನ್ರೀ.. ರೇಣುಕಾಚಾರ್ಯ ಮಂತ್ರಿ ಆಗಲ್ವೇನ್ರೀ” ಎಂದು ಡಿಕೆಶಿಯವರು ರೇಣುಕಾಚಾರ್ಯ ಅವರನ್ನು ಪ್ರಶ್ನಿಸಿದ್ದಾರೆ.

ಡಿಕೆಶಿ ಕಿಚಾಯಿಸಿದ್ದಕ್ಕೆ ನಗುತ್ತಾ, “ಅಯ್ಯೋ ಬಿಡಿ, ಆಗೋಣ”ಎಂದು ಉತ್ತರಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಪಶ್ಚಿಮ ದ್ವಾರದ ಮೂಲೆಗೆ ಹೋಗಿ, ಸುಮಾರು ಐದು ನಿಮಿಷ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ದೂರದಲ್ಲಿನ ಇಬ್ಬರ ಸಮಾಲೋಚನೆಯನ್ನು ಅಲ್ಲಿದ್ದವರು ತದೇಕಚಿತ್ತದಿಂದ ನೋಡುತ್ತಿದ್ದರು.

ಕೆಪಿಸಿಸಿ ಅಧ್ಯಕ್ಷರ ಜೊತೆಗಿನ ಮಾತುಕತೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, “ರಾಜಕಾರಣ ಬೇರೆ, ವೈಯಕ್ತಿಕ ಸಂಬಂಧಗಳು ಬೇರೆ. ಅವರು ನನ್ನ ಆತ್ಮೀಯ ಗೆಳೆಯರು, ಆವಾಗಾವಾಗ ನಾನು ಅವರನ್ನು ಭೇಟಿಯಾಗುತ್ತಿರುತ್ತೇನೆ, ಇದಕ್ಕೆ ರಾಜಕೀಯ ಆಯಾಮ ಬೇಡ”ಎನ್ನುವ ಸ್ಟ್ಯಾಂಡರ್ಡ್ ಉತ್ತರವನ್ನು ನೀಡಿದ್ದಾರೆ.

ಕಳೆದ ತಿಂಗಳು ನವದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ರೇಣುಕಾಚಾರ್ಯ ಭೇಟಿಯಾಗಿದ್ದರು. ಮುಖ್ಯಮಂತ್ರಿ ಬೊಮ್ಮಾಯಿಯವರ ದೆಹಲಿ ಪ್ರವಾಸದ ವೇಳೆ ತೆರಳಿದ್ದ ರೇಣುಕಾಚಾರ್ಯ, ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸದ್ಯದಲ್ಲಿಯೇ ಉತ್ತಮ ಸ್ಥಾನ ಸಿಗಲಿದೆ ಎಂಬ ಆಶ್ವಾಸನೆಯನ್ನು ಅರುಣ್ ಸಿಂಗ್ ನೀಡಿದ್ದಾರೆ ಎಂದು ವರದಿಯಾಗಿತ್ತು.

WhatsApp
Facebook
Telegram
error: Content is protected !!
Scroll to Top