Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ‘ವೈ’ ಕೆಟಗರಿ ಭದ್ರತೆ!

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಈ ಹಿಂದೆಯೇ ಹಲವು ಬೆದರಿಕೆಗಳು ಬಂದಿದ್ದವು. ಸಿನಿಮಾವನ್ನು ನಿಲ್ಲಿಸುವಂತೆ ಅವರಿಗೆ ಬೆದರಿಕೆ ಬಂದಿತ್ತು. ಇದೀಗ ಸಿನಿಮಾ ಯಶಸ್ಸು ಕಂಡಿದೆ. ಜೊತೆಗೆ ವಿವೇಕ್‌ಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗಿದೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಚಿತ್ರದ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳೇನೇ ಇದ್ದರೂ, ಕಲೆಕ್ಷನ್ ಮಾತ್ರ ಹೊಸ ದಾಖಲೆ ಬರೆದಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ವೈ ಕೆಟಗರಿ ಭದ್ರತೆ ಒದಲಾಗಿಸಲಾಗಿದೆ. ಸಿಆರ್‌ಪಿಎಫ್ ಭದ್ರತೆಯೊಂದಿಗೆ ಅವರು ದೇಶದಲ್ಲಿ ಸಂಚರಿಸಬಹುದಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಹೇಗಿರುತ್ತದೆ ವೈ ಕೆಟಗರಿ ಭದ್ರತೆ?
ವಿವೇಕ್ ಅಗ್ನಿಹೋತ್ರಿಗೆ ಮೊದಲಿನಿಂದಲೂ ಬೆದರಿಕೆಗಳು ಬರುತ್ತಿವೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೆರೆಕಂಡ ಬಳಿಕ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ಇದರನ್ವಯ ಅವರಿಗೆ 24 ಗಂಟೆಗಳ ಭದ್ರತೆ ನೀಡಲಾಗುವುದು. 1-2 ಶಸ್ತ್ರಸಜ್ಜಿತ ಗನ್‌ಮ್ಯಾನ್‌ಗಳು ಪಾಳಿ ಆಧಾರದ ಮೇಲೆ ವಿವೇಕ್‌ಗೆ ಭದ್ರತೆ ನೀಡುತ್ತಾರೆ. ಜೊತೆಗೆ 7 ಪೊಲೀಸ್‌ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಕೂಡ ಇರುತ್ತಾರೆ. ಈ ಹಿಂದೆ ನಟ, ಸಂಸದ ಸನ್ನಿ ಡಿಯೋಲ್‌ ಅವರಿಗೂ ಕೂಡ ವೈ ಕೆಟಗರಿ ಭದ್ರತೆ ನೀಡಲಾಗಿತ್ತು. ಪಂಜಾಬ್‌ನ ಗುರ್‌ದಾಸ್‌ಪುರ ಕ್ಷೇತ್ರದ ಸಂಸದರಾಗಿರುವ ಸನ್ನಿಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿತ್ತು. ಆ ಹಿನ್ನೆಲೆಯಲ್ಲಿ ಅವರಿಗೆ ಪಂಜಾಬ್‌ ಸರ್ಕಾರ ವೈ ಕೆಟಗರಿ ಭದ್ರತೆ ನೀಡಿತ್ತು. ಜೊತೆಗೆ ಕೇಂದ್ರ ಗೃಹ ಸಚಿವಾಲಯ ಕೂಡ ವೈ ಕೆಟಗರಿ ಭದ್ರತೆ ನೀಡಿತ್ತು.

ಮೋದಿ, ಅಮಿತ್ ಶಾ ಮೆಚ್ಚುಗೆ
ದೇಶಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರತಂಡವನ್ನು ಭೇಟಿ ಮಾಡಿದ್ದ ಅವರು, ನಿರ್ದೇಶಕ ವಿವೇಕ್‌ಗೆ ಅಗ್ನಿಹೋತ್ರಿಗೆ ಅಭಿನಂದನೆ ತಿಳಿಸಿದ್ದರು. ಹಾಗೆಯೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರತಂಡವನ್ನು ಭೇಟಿ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಇತಿಹಾಸದಲ್ಲಿ ಹುದುಗಿದ್ದ ಸತ್ಯವೊಂದನ್ನು ಈ ಸಿನಿಮಾದ ಮೂಲಕ ತಿಳಿಸಿದ್ದಾರೆ. ಇಂಥ ತಪ್ಪುಗಳು ಮತ್ತೆಂದೂ ಸಂಭವಿಸದೇ ಇರಲಿ’ ಎಂದು ಅವರು ಹೇಳಿದ್ದರು. ಚಿತ್ರದ ನಿರ್ದೇಶಕ ವಿವೇಕ ಅಗ್ನಿಹೊತ್ರಿ ಪಲ್ಲವಿ ಜೋಷಿ, ಅನುಪಮ್ ಖೇರ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಟ್ಯಾಕ್ಸ್ ಫ್ರೀ
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ಸಿಕ್ಕಿದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕರ್ನಾಟಕದ ಎಲ್ಲ ಸಚಿವರು ಮತ್ತು ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಮಧ್ಯ ಪ್ರದೇಶದಲ್ಲಿ ಸಿನಿಮಾ ವೀಕ್ಷಣೆಗಾಗಿ ಪೊಲೀಸ್ ಸಿಬ್ಬಂದಿಗೆ ಸರ್ಕಾರದ ವತಿಯಿಂದಲೇ ರಜೆ ನೀಡಲಾಗಿತ್ತು.

WhatsApp
Facebook
Telegram
error: Content is protected !!
Scroll to Top