ಮಂಗಳೂರು ಮಳೆಯಿಂದ ಧರಶಾಹಿಯಾದ ಭಾರೀ ಗಾತ್ರದ ಮರ : ತಪ್ಪಿದ ದೊಡ್ಡ ಅನಾಹುತ..!

ಮಂಗಳೂರು: ನಗರದಲ್ಲಿ ಮುಂಜಾನೆ ಸುರಿದ ಮಳೆಯಿಂದಾಗಿ ಭಾರೀ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ನಗರದ ರೊಝಾರಿಯೋ ಚರ್ಚ್ ಹಾಗೂ ಶಾಲಾ ಕಾಲೇಜಿಗೆ ತೆರಳುವ ಸಂಪರ್ಕ ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ಧರಶಾಹಿಯಾಗಿದೆ.

ಬೆಳಿಗ್ಗೆ 9.15 ರ ವೇಳೆಗೆ ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಮೇಲೆ ಉರುಳಿದ ಮರವು ರಸ್ತೆಯನ್ನೂ ಆಕ್ರಮಿಸಿಕೊಂಡಿತು. ಈ ಸಂದರ್ಭ ಲಾರಿಯಲ್ಲಿದ್ದ ಚಾಲಕ ಪುರುಷೋತ್ತಮ ಮರ ಧರಶಾಹಿಯಾಗುತ್ತಲೇ ಲಾರಿಯಿಂದ ಕೆಳಕ್ಕೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಬಿಎಸ್‌ಎನ್‌ಎಲ್ ಕಚೇರಿ ಆವರಣದಿಂದ ಬುಡ ಸಮೇತ ಕಂಪೌಂಡ್ ಅನ್ನು ಉರುಳಿಸಿಕೊಂಡು ಮರವು ಧರಶಾಹಿಯಾಗಿದೆ.

ಶಾಲಾ, ಕಾಲೇಜು ತರಗತಿ ಪ್ರಾರಂಭಗೊಳ್ಳುವ ಸಮಯವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಎಳೆಯ ಮಕ್ಕಳು ಹಾಗೂ ಮಕ್ಕಳ ಪೋಷಕರ ವಾಹನಗಳ ಓಡಾಟ ಅಧಿಕ ಸಂಖ್ಯೆಯಲ್ಲಿ ಇರುತ್ತದೆಯಾದರೂ, ಅದೃಷ್ಟವಶಾತ್ ಮರ ಧರಶಾಹಿ ಸಮಯದಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳಾಗಲೀ, ಜನ ಸಂಚಾರವಾಗಲೀ ಕಂಡು ಬಾರದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಅಲ್ಲದೇ, ಮರ ಉರುಳಿದ ವಿರುದ್ಧ ದಿಕ್ಕಿನಲ್ಲಿ ವಿದ್ಯುತ್ ಕಂಬವೂ ಇದ್ದು, ಅದೃಷ್ಟವಶಾತ್ ಮರವು ಇದರ ಮಧ್ಯೆಯೇ ರಸ್ತೆ ಮೇಲೆ ಉರುಳಿ ಬಿದ್ದಿದೆ.

ರಸ್ತೆಗೆ ಉರುಳಿದ ಮರವನ್ನು ಪಾಂಡೇಶ್ವರ ಅಗ್ನಿಶಾಮಕದಳದ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಪಾಂಡೇಶ್ವರ ಪೊಲೀಸ್, ಟ್ರಾಫಿಕ್ ಪೊಲೀಸರು ಸಂಚಾರ ನಿಯಂತ್ರಿಸಿದರು. ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top