‘ಗಂಗೂಬಾಯಿ..’ ಚಿತ್ರಕ್ಕೆ 20 ಕೋಟಿ ರೂ. ಸಂಬಳ ಪಡೆದ ಆಲಿಯಾ ಭಟ್

ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರ ಬತ್ತಳಿಕೆಯಿಂದ ಬಂದಿರುವ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ಸೂಪರ್​ ಹಿಟ್​ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಮೋಡಿ ಮಾಡಿದೆ. ಮುಖ್ಯ ಪಾತ್ರದಲ್ಲಿ ಆಲಿಯಾ ಭಟ್​ ಅವರು ಅಭಿನಯಿಸಿದ್ದು, ಅತಿಥಿ ಪಾತ್ರದಲ್ಲಿ ಅಜಯ್​ ದೇವಗನ್​ ಕಾಣಿಸಿಕೊಂಡಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಸದ್ದು ಮಾಡಿದೆ. ಗಂಗೂಬಾಯಿ ಕಾಠಿಯಾವಾಡಿ ಜೀವನ ಆಧರಿಸಿ ಈ ಚಿತ್ರ ಮೂಡಿಬಂದಿದ್ದು, ಆಲಿಯಾ ಭಟ್​ (Alia Bhatt) ಅವರು ವೇಶ್ಯೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆಲಿಯಾಗೆ ಬಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​ ಇದೆ. ಈಗಾಗಲೇ ಅವರು ಹಲವು ಹಿಟ್​ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಸೂಪರ್​ ಹಿಟ್​ ಸಿನಿಮಾಗಳ ಸಾಲಿಗೆ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಕೂಡ ಸೇರಿಕೊಂಡಿದೆ. ಈ ಚಿತ್ರಕ್ಕಾಗಿ ಅವರು ತೆಗೆದುಕೊಂಡ ಸಂಭಾವನೆ (Alia Bhatt Remuneration) ಎಷ್ಟು ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಆಲಿಯಾ ಭಟ್​ ಅವರು ಬರೋಬ್ಬರಿ 20 ಕೋಟಿ ರೂಪಾಯಿಯನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಂಜಯ್ ಲೀಲಾ ಬನ್ಸಾಲಿ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಜೊತೆ ಕೆಲಸ ಮಾಡಬೇಕು ಎಂದು ಎಲ್ಲ ಕಲಾವಿದರೂ ಬಯಸುತ್ತಾರೆ. ಅದೇ ರೀತಿ ಆಲಿಯಾ ಭಟ್​ ಕೂಡ ಆಸೆ ಇಟ್ಟುಕೊಂಡಿದ್ದರು. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಮೂಲಕ ಅವರ ಆಸೆ ಈಡೇರಿತು. ಜೊತೆಗೆ ಅವರಿಗೆ ಕೈತುಂಬ ಸಂಭಾವನೆ ಕೂಡ ಸಿಕ್ಕಿದೆ. ಆಲಿಯಾ ಭಟ್​ ಅವರಿಗೆ 20 ಕೋಟಿ ರೂಪಾಯಿ ಸಿಕ್ಕಿದ್ದರೆ, ಅಜಯ್​ ದೇವಗನ್​ ಅವರು 11 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಆಗಿದೆ.

ಜಯಂತಿ ಲಾಲ್​ ಗಡಾ ಮತ್ತು ಸಂಜಯ್​ ಲೀಲಾ ಬನ್ಸಾಲಿ ಅವರು ಜೊತೆಯಾಗಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬಹುಕೋಟಿ ರೂ. ಬಜೆಟ್​ನಲ್ಲಿ ಈ ಚಿತ್ರ ತಯಾರಾಗಿದೆ. ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್​ ಬಂದಿದೆ. ಚಿತ್ರಮಂದಿರದಲ್ಲಿ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒಂದು ವಾರ ಕಳೆಯುವುದರೊಳಗೆ 73.94 ಕೋಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಬಾಲಿವುಡ್​ನಲ್ಲಿ ಮಹಿಳಾ ಪ್ರಧಾನ ಕಥೆಗೂ ಪ್ರೇಕ್ಷಕರು ಮನ್ನಣೆ ನೀಡುತ್ತಾರೆ ಎಂಬುದು ಈ ಸಿನಿಮಾ ಮೂಲಕ ಸಾಬೀತಾಗಿದೆ. ಈ ಗೆಲುವಿನಿಂದ ಆಲಿಯಾ ಭಟ್​ ಅವರ ಚಾರ್ಮ್​ ಹೆಚ್ಚಿದೆ.

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನ ನಟಿ ಕಂಗನಾ ರಣಾವತ್​ ಅವರು ಅಪಶಕುನ ನುಡಿದಿದ್ದರು. ‘ಈ ಸಿನಿಮಾದಿಂದ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಸುಟ್ಟು ಹೋಗಲಿದೆ’ ಎಂದು ಹೇಳಿದ್ದರು. ಆದರೆ ಅವರ ಮಾತು ಸುಳ್ಳಾಯಿತು. ಚಿತ್ರಕ್ಕೆ ಉತ್ತಮ ಕಲೆಕ್ಷನ್​ ಆಗಿದೆ. ಅದನ್ನು ಕಂಡು ಕಂಗನಾ ಮನಸ್ಸು ಬದಲಾಯಿತು. ನಂತರ ಚಿತ್ರತಂಡದ ಪರವಾಗಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು.

‘ದಕ್ಷಿಣ ಭಾರತದ ಸಿನಿಮಾಗಳ ದಾಖಲೆಯ ಕಲೆಕ್ಷನ್​ನಿಂದಾಗಿ ಚಿತ್ರಮಂದಿರಗಳಲ್ಲಿ ಮತ್ತೆ ಕಳೆ ಬಂದಿದೆ ಎಂಬುದನ್ನು ಕೇಳಿ ಖುಷಿ ಆಯಿತು. ಸೂಪರ್​ ಸ್ಟಾರ್​ ಡೈರೆಕ್ಟರ್​, ಸ್ಟಾರ್​ ಹೀರೋ ಇರುವ ಒಂದು ಮಹಿಳಾ ಪ್ರಧಾನ ಸಿನಿಮಾದಿಂದ ಹಿಂದಿ ಚಿತ್ರರಂಗ ಕೂಡ ಪುಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಪುಟ್ಟ ಹೆಜ್ಜೆಗಳೇ ಆಗಿರಬಹುದು, ಆದರೆ ಅವು ಮಹತ್ವವಾದವು. ಕಷ್ಟದ ಪರಿಸ್ಥಿತಿಯಲ್ಲಿ ಇರುವ ಚಿತ್ರಮಂದಿರಗಳಿಗೆ ಈ ಬೆಳವಣಿಗೆ ತುಂಬ ಮುಖ್ಯ. ಗ್ರೇಟ್​! ಇಂಥ ಸಂದರ್ಭದಲ್ಲಿ ಮೂವೀ ಮಾಫಿಯಾದವರು ಒಳ್ಳೆಯ ಕೆಲಸ ಮಾಡ್ತಾರೆ ಅಂಥ ನಾನು ನಿರೀಕ್ಷಿಸಿರಲಿಲ್ಲ. ಅವರು ಒಳ್ಳೆಯದು ಮಾಡಿದಾಗ ನಾನು ಖಂಡಿತಾ ಹೊಗಳುತ್ತೇನೆ. ಇನ್ನೂ ಒಳ್ಳೆಯದನ್ನು ನಿರೀಕ್ಷಿಸುತ್ತೇನೆ’ ಎಂದು ಕಂಗನಾ ರಣಾವತ್​ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

WhatsApp
Facebook
Telegram
error: Content is protected !!
Scroll to Top