ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ..!

ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನ ಭಾರತದ ಆಲ್‍ರೌಂಡರ್ ಆಟಗಾರ ರವೀಂದ್ರ ಜಡೇಜಾ ದಾಖಲೆಯ ಶತಕ ಸಿಡಿಸಿ ಮೆರೆದಿದ್ದಾರೆ.

ಎರಡನೇ ದಿನದಾಟದ ಆರಂಭದಿಂದಲು ಬೌಂಡರಿ ಸಿಕ್ಸರ್‌ಗಳ ಮೂಲಕ ಅದ್ಭುತ ಇನ್ನಿಂಗ್ಸ್ ಕಟ್ಟಿದ ಜಡೇಜಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಶತಕದ ಬಳಿಕ ಮತ್ತೆ ರನ್ ವೇಗ ಹೆಚ್ಚಿಸಿಕೊಂಡ ಜಡ್ಡು ಅಜೇಯ 175 ರನ್ (228 ಎಸೆತ, 17 ಬೌಂಡರಿ, 3 ಸಿಕ್ಸ್) ಹೊಡೆಯುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇದರೊಂದಿಗೆ ಜಡ್ಡು 7ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮ್ಯಾನ್ ಒಬ್ಬ ಸಿಡಿಸಿದ ಅತೀ ಹೆಚ್ಚು ರನ್‍ಗಳ ಸರದಾರ ಎನಿಸಿಕೊಂಡಿದ್ದಾರೆ.

ಈ ಮೊದಲು 7ನೇ ಕ್ರಮಾಂಕದಲ್ಲಿ ಕಪಿಲ್ ದೇವ್ 163 ರನ್ ಸಿಡಿಸಿದ ದಾಖಲೆ ಇತ್ತು. ಈ ದಾಖಲೆಯನ್ನು ಜಡೇಜಾ ಮುರಿದು ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. 7ನೇ ಕ್ರಮಾಂಕದಲ್ಲಿ ಅತೀ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ ಜಡೇಜಾ ಮೊದಲ ಸ್ಥಾನದಲ್ಲಿದ್ದರೆ, ಆ ಬಳಿಕ ಕಪಿಲ್ ದೇವ್, ನಂತರ ಕ್ರಮವಾಗಿ 159 ರನ್ ಸಿಡಿಸಿರುವ ರಿಷಬ್ ಪಂತ್ ಮತ್ತು 144 ರನ್ ಸಿಡಿಸಿರುವ ಮಹೇಂದ್ರ ಸಿಂಗ್ ಧೋನಿ ಇದ್ದಾರೆ

ಜಡೇಜಾ ತನ್ನ ಟೆಸ್ಟ್ ಕ್ರಿಕೆಟ್‍ನ ಎರಡನೇ ಶತಕ ಸಿಡಿಸಿದ ಬಳಿಕ ನಿನ್ನೆ ಹೃದಾಯಘಾತದಿಂದ ಸಾವನ್ನಪ್ಪಿದ ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟಿಗ ಶೇನ್ ವಾರ್ನ್ ಅವರಿಗೆ ಅರ್ಪಿಸಿದ್ದಾರೆ. ವಾರ್ನ್ ಈ ಹಿಂದೆ ರವೀಂದ್ರ ಜಡೇಜಾ ಮುಂದೊಂದು ದಿನ ಕ್ರಿಕೆಟ್‍ನ ರಾಕ್‍ಸ್ಟಾರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಈ ಮಾತು ವಾರ್ನ್ ನಿಧನದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.

WhatsApp
Facebook
Telegram
error: Content is protected !!
Scroll to Top