ಹಲ್ಲೆಗೊಳಗಾದ ಕೊರಗ ಸಮಾಜಕ್ಕೆ ಪರಿಹಾರ. ಪ್ರಕರಣ ಸಿಒಡಿಗೆ. ನ್ಯಾಯ ಮರೀಚಿಕೆಯೆ ?

ಕೋಟ: ಉಡುಪಿ ಜಿಲ್ಲೆಯ ಕೋಟದಲ್ಲಿ ಮೆಹಂದಿ ಕಾರ್ಯಕ್ರಮದ ವೇಳೆ ಕೊರಗ ಕುಟುಂಬದ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಘೋಷಿಸಿದ್ದಾರೆ. ಈ ದೌರ್ಜನ್ಯದಲ್ಲಿ ಪೊಲೀಸರಿಂದ ಹಲ್ಲೆಗೆ ಒಳಗಾದ ಮದುಮಗ ರಾಜೇಶ್ ಸೇರಿದಂತೆ ಅವರ ಕುಟುಂಬದ ಆರು ಸದಸ್ಯರಿಗೆ ಸರ್ಕಾರ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು ಮೊದಲ ಕಂತು 50 ಸಾವಿರ ರೂಪಾಯಿಯನ್ನು ಗೃಹ ಸಚಿವರು ಸಂತ್ರಸ್ತರಿಗೆ ಹಸ್ತಾಂತರಿಸಿದ್ದಾರೆ

ಇಂದು ಬೆಳಿಗ್ಗೆ ಕೋಟಕ್ಕೆ ಆಗಮಿಸಿ ಸಂತ್ರಸ್ತ ರಾಜೇಶ್ ಮನೆಗೆ ಭೇಟಿ ನೀಡಿದ ಗೃಹ ಸಚಿವರು ‘ಕೊರಗ ಕುಟುಂಬದ ಮೇಲೆ ನಡೆದ ಹಲ್ಲೆ ಅಮಾನವೀಯ. ಬಳಿಕ ಪೊಲೀಸರು ದಾಖಲಿಸಿದ ಪ್ರತಿ ದೂರು ಇನ್ನೂ ಅಮಾನವೀಯ. ಪೊಲೀಸರು ದಾಖಲಿಸಿದ ಪ್ರತಿ ದೂರು ಸುಳ್ಳು ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಈ ಪ್ರತಿ ದೂರಿನ ಬಳಿಕ ದಾಖಲಾಗಿರುವ ಮೊಕದ್ದಮೆಯಿಂದ ರಾಜೇಶ್ ಮತ್ತು ಕುಟುಂಬಕ್ಕೆ ಹಾಗೂ ದೂರಿನಲ್ಲಿ ಉಲ್ಲೇಖಿಸಲಾಗಿರುವ ಇತರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಆ ಕುರಿತು ಯಾರಿಗೂ ಭಯಬೇಡ ಎಂದು ಭರವಸೆ ಇತ್ತರು.

‘ಎರಡೂ ಪ್ರಕರಣಗಳನ್ನು ಸಿಒಡಿಗೆ ವಹಿಸಲಾಗುತ್ತದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವಾರದ ಒಳಗೆ ಕೊರಗರ ಮೇಲಿರುವ ದೂರುಗಳನ್ನು ಹಿಂಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ. ಕೋಟ ಪಿಎಸ್‌ಐ ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿರದ ಕಾರಣ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗೆ ತಿಳಿದಿರಲಿಲ್ಲ. ಈ ಎಲ್ಲದರ ಕುರಿತು ತನಿಖೆ ನಡೆಸಲಾಗುತ್ತದೆ’ ಎಂದು ಗೃಹ ಸಚಿವರು ಹೇಳಿದರು.

ದೌರ್ಜನ್ಯ ಎಸಗಿದ ಎಸ್‌ಐ ಅನ್ನು ಮಾತ್ರ ಅಮಾನತು ಮಾಡಲಾಗಿದೆ. ಉಳಿದ ಸಿಬ್ಬಂದಿಗಳನ್ನು ಬೇರೆ ಠಾಣೆಗೆ ಸ್ಥಳಾಂತರಗೊಳಿಸಿದ್ದಾರೆ. ಅವರ ಂಏಲೆ ಕ್ರಮ ಯಾಕಿಲ್ಲ ಎಂದು ಸ್ಥಳೀಯ ಹೋರಾಟಗಾರರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

WhatsApp
Facebook
Telegram
error: Content is protected !!
Scroll to Top