ಮೀನುಗಾರನೊಬ್ಬನನ್ನು ಮೊಬೈಲ್ ಕಳ್ಳತನದ ಆರೋಪ ಹೊರಿಸಿ ಕೈಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ತೂಗು ಹಾಕಿ ಹಲ್ಲೆ

ಮಂಗಳೂರು: ನಗರದ ಬಂದರ್ ದಕ್ಕೆಯಲ್ಲಿ‌ ಆಂಧ್ರಪ್ರದೇಶ‌ ಮೂಲದ ವೈಲ ಶೀನು(32) ಎಂಬ ಮೀನುಗಾರನೊಬ್ಬರನ್ನು ಮೊಬೈಲ್ ಕಳ್ಳತನದ ಆರೋಪ ಹೊರಿಸಿ ಕೈಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ತೂಗು ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಂಡೂರು ಪೋಲಯ್ಯ(23), ಅವುಲ ರಾಜ್ ಕುಮಾರ್(26), ಕಾಟಂಗರಿ ಮನೋಹರ್(21), ವೂಟುಕೋರಿ ಜಾಲಯ್ಯ(30), ಕರಪಿಂಗಾರ ರವಿ(27) ಹಾಗೂ ಪ್ರಳಯಕಾವೇರಿ ಗೋವಿಂದಯ್ಯ(47)  ಎಂದು ಗುರುತಿಸಲಾಗಿದೆ. ಇವರೆಲ್ಲರೂ ಆಂಧ್ರ ಪ್ರದೇಶ ಮೂಲದವರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ತಿಳಿಸಿದ್ದಾರೆ.     

ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್ ವೊಂದಕ್ಕೆ ಮೀನುಗಾರಿಕಾ ಕಾರ್ಮಿಕರಾಗಿರುವ ವೈಲ ಶೀನು ಡಿ.14ರಂದು ರಾತ್ರಿ ಹೋಗಿದ್ದರು. ಬಳಿಕ ವಾಪಾಸ್ಸಾಗಿ ತಾನು ಕೆಲಸಕ್ಕಿದ್ದ ಬೋಟ್ ನಲ್ಲಿ ಮಲಗಿದ್ದರು. ಆದರೆ ಡಿ.15ರಂದು ಬೆಳಗ್ಗೆ ತಮ್ಮ ಬೋಟ್ ಗೆ ಬಂದು ತಮ್ಮ ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿದ್ದಿ ಎಂದು ಆರೋಪಿಸಿ ಆರೋಪಿಗಳಾದ ಪೋಲಯ್ಯ, ರಾಜ್ ಕುಮಾರ್, ಮನೋಹರ್, ಜಾಲಯ್ಯ, ರವಿ ಹಾಗೂ ಗೋವಿಂದಯ್ಯ ಎಂಬವರು ಶೀನುವನ್ನು ಅಪಹರಿಸಿ ತಾವು ಕೆಲಸ ಮಾಡುವ ಬೋಟಿಗೆ ಕೊಂಡೊಯ್ದಿದ್ದಾರೆ. ಈ ವೇಳೆ ಶೀನುವಿನ ಕೈಕಾಲುಗಳನ್ನು ಕಟ್ಟಿ, ಬೊಬ್ಬೆ ಹಾಕದಂತೆ ಬಾಯಿಮುಚ್ಚಿ ತಲೆಕೆಳಗಾಗಿ ಬೋಟಿನ ಆರಿಯ ಕೊಕ್ಕೆಗೆ ನೇತಾಡಿಸಿದ್ದಾರೆ. ಬಳಿಕ ಶೀನು ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಶೀನುವನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.     

                     

WhatsApp
Facebook
Telegram
error: Content is protected !!
Scroll to Top